ಅಣಕವಾಡು
"ಆಕಾಶವೇ ಬೀಳಲಿ ಮೇಲೆ" ಧಾಟಿಯಲ್ಲಿ ಹಾಡಿಕೊಂಡು ಎಂಜಾಯ್ ಮಾಡಿ.
ಆಕಾಶವೆ ಬೀಳಲಿ ಮೇಲೆ
ನಾನೆಂದು ದ್ವೇಷಿಸೆನು
ಭೂಮಿಯೆ ಬಾಯಿ ಬಿಟ್ಟರೂ ಸರಿಯೇ
ನಾನೆಂದೂ ತಿನ್ನುವೆನು
ನೀನಿರುವುದೆ ನನಗಾಗಿ
ಈ ಜೀವ ನಿನಗಾಗಿ //ಆಕಾಶವೆ//
ಬಾಣಲೆಯಲ್ಲಿ ತುಪ್ಪವ ಸುರಿದು
ರವೆಯ ಘಮ್ಮ ಹುರಿಯುವೆನು
ಅವರೆ ಬಿಡಿಸಿ ಬೇಯಿಸಿಕೊಂಡು
ಉಪ್ಪು ಸ್ವಲ್ಪ ಹಾಕುವೆನು
ಒಗ್ಗರ್ಣೇಗೆ ಸಾಸಿವೆ ಬೇಳೆ
ಒಣಮೆಣ್ಸಿನ್ಜೊತೆ ಹಸಿಮೆಣಸು
ಚೂರಿಂಗೂ ಕರಿಬೇವು ಬೆರೆಸಿ
ಗೋಡಂಬಿಯ ಹಾಕುವೆನು
ಎಲ್ಲ ಹೀಗೆ ಕೈಗೆ ಸಿಗಲು
ಬೇರೇ ತಿಂಡಿ ಏಕೆ ಬೇಕು
ನಮ್ ಪ್ರೀತಿ ಉಪ್ಪಿಟ್ಟೇ ಸಾಕು ಉಪ್ಪಿಟ್ಟೇ ಸಾಕು
ಸಾಕು // ಆಕಾಶವೇ ಬೀಳಲಿ
2
ಜೀರಿಗೆ ಕರಿ ಮೆಣಸಿನ
ಪುಡಿಯ ಕುಟ್ಟಿಕುಟ್ಟಿ ಬೆರೆಸುವೆನು
ಬಿಸಿಯಾಗಲು ನೀರನ್ನು ಇಟ್ಟು
ಕಾಳ್ ಹಾಕಿ ಕೆದಕುವೆನು
ಹುರಿದ ರವೆಯ ಮೆಲ್ಲಗೆ ಬೆರೆಸಿ
ರುಚಿಗುಪ್ಪು ಹಾಕುವೆನು
ದೊಡ್ಡ ತಟ್ಟೆ ಮುಚ್ಚಿ ಸಣ್ಣ
ಉರಿಯಲ್ಲೇ ಬೇಯ್ಸುವೆನು
ಈ ಮಾತಿಗೆ ಬಾಣಲಿ ಸಾಕ್ಷಿ
ಉರಿಯುತಿರುವ ಒಲೆಯೇ ಸಾಕ್ಷಿ
ಎಂದಾದ್ರೂ ನೀವು ಹೀಗೆ ಮಾಡಿ
ತಿಂದು ಹೇಳಿ, ಹೇಳಿ//ಆಕಾಶವೆ//
3
ಉಪ್ಪಿಟ್ಟು ಬೆಂದ ಮೇಲೆ
ಒಲೆಯ ನಾನೇ ಆರಿಸುವೆ
ನಿಂಬೆರಸವ ಮೇಲೆಹಿಂಡೀ
ಕಾಯಿ ಕೊತ್ತಂಬ್ರಿ ಸುರಿದಿಡುವೆ
ಮೇಲಷ್ಟು ತುಪ್ಪವ ಸುರಿದು
ಹಗುರ ಕೈ ಆಡಿಸುವೇ
ಅದರ ಘಮಕೆ ನಾನೂ
ಸೋತೂ ಶರಣ್ಶರಣು ಎನ್ನುವೇ
ಈ ಮಾತಿಗೆ ಖಾಲಿ ತಟ್ಟೆ ಸಾಕ್ಷಿ
ಖಾಲಿಯಾದ ಬಾಣಲೆ ಸಾಕ್ಷಿ
ಇಂದೀಗ ಹೊಟ್ಟೆ ತುಂಬೀ,
ಮನಸೂ ಸ್ವರ್ಗವಾಯ್ತು //ಆಕಾಶವೆ//